ಮಾರಿಸ್, ಮ್ಯಾಟರ್‍ಲಿಂಕ್
1862-1949 ನೊಬೆಲ್ ಪ್ರಶಸ್ತಿ ಪಡೆದ ಬೆಲ್ಜಿಯಮ್ ನಾಟಕಕಾರ, ಪ್ರಬಂಧಕಾರ ಹಾಗೂ ಕವಿ. ಇವನ ಬರಹಗಳೆಲ್ಲ ಫ್ರೆಂಚ್ ಭಾಷೆಯಲ್ಲಿವೆ. ಈತ ಘೆಂಟ್ ನಗರದಲ್ಲಿ 29 ಆಗಸ್ಟ್ 1862 ರಂದು ಜನಿಸಿದ, ಜೆಸೂಯಿಟ್ ಕಾಲೇಜಿನಿಂದ ಪದವಿಗಳಿಸಿದ ಮೇಲೆ ಘೆಂಟ್ ವಿಶ್ವವಿದ್ಯಾಲಯದಲ್ಲಿ ಕಾನೂನು ವ್ಯಾಸಂಗ ಮಾಡಿದ, ವಿದ್ಯಾರ್ಥಿ ದೆಸೆಯಲ್ಲಿಯೇ ಸಾಹಿತ್ಯ ರಚನೆಗೆ ತೊಡಗಿದ. ನ್ಯಾಯವಾದಿಯಾಗಿದ್ದ ತನ್ನ ತಂದೆಯ ಅಪೇಕ್ಷೆಯಂತೆ ಕಾನೂನು ವ್ಯಾಸಂಗ ಮಾಡಿ ಬ್ಯಾರಿಸ್ಟರ್ ಆದರೂ ಇತನ ಒಲವು ಹೆಚ್ಚಾಗಿ ಸಾಹಿತ್ಯದ ಕಡೆಗೇ ಇತ್ತು. ಹೀಗಾಗಿ ನ್ಯಾಯವಾದಿ ವೃತ್ತಿಯನ್ನು ನೆಪಮಾತ್ರ ಸಾಗಿಸಿಕೊಂಡು ಸಂಪೂರ್ಣ ಬರವಣಿಗೆಯಲ್ಲಿ ಮಗ್ನನಾದ. 1989ರಲ್ಲಿ ಇವನ ಮೊದಲ ಕವಿತಾ ಸಂಗ್ರಹ ` ಹಾಟ್ ಹೌಸಸ್ ಮತ್ತು ಮೊದಲ ನಾಟಕ `ಪ್ರಿನ್ಸೆಸ್ ಮ್ಯಾಲೀನೆ ಪ್ರಕಟವಾದವು. ಈ ನಾಟಕ ವಿಮರ್ಶಕರ ಪ್ರಶಂಸೆಗೆ ಪಾತ್ರವಾಯಿತು. ಸಾಹಿತ್ಯ ಪ್ರಿಯರು ಇತನನ್ನು ಫ್ಲೆಮಿಷ್ ಷೆಕ್ಸ್‍ಪಿಯರ್ ಎಂದು ಕೊಂಡಾಡಿದರು. ಅನಂತ ಒಂದಾದ ಮೇಲೊಂದು ನಾಟಕಗಳು ಪ್ರಕಟವಾಗತೊಡಗಿದವು. 1995ರಲ್ಲಿ ಈತನಿಗೆ ಜಾರ್ಜೆಟ್ ಲೆಬ್ಲಾಂಕ್ ಎಂಬ ಪ್ರಸಿದ್ಧ ರಂಗಭೂಮಿ ನಟಿ ಹಾಗೂ ಗಾಯಕಿಯ ಪರಿಚಯವಾಯಿತು. ಈ ಪರಿಚಯ ಸ್ನೇಹವಾಗಿ, ಪ್ರೀತಿಯಾಗಿ ಮದುವೆಯಾಗದಿದ್ದರೂ ಮುಂದೆ ಸುಮಾರು ಇಪ್ಪತೈದು ವರ್ಷಗಳ ಕಾಲ ಉಳಿದು ಬಂತು. ಈತನ ಬಹುಪಾಲು ನಾಟಕಗಳಲ್ಲಿ ಪ್ರಧಾನ ಸ್ತ್ರೀ-ಪಾತ್ರಗಳನ್ನು ಈಕೆ ಅಭಿನಯಿಸುತ್ತಿದ್ದಳು. ಈತ 1897ರಲ್ಲಿ ಘೆಂಟ್ ನಗರವನ್ನು ಬಿಟ್ಟು, ಲೆಬ್ಲಾಂಕಳೊಡನೆ ಪ್ಯಾರಿಸ್ಸಿಗೆ ಹೋಗಿ ಗ್ರಾಸ್ ಎಂಬಲ್ಲಿ, ಗ್ರಾಮೀಣ ಪರಿಸರದಲ್ಲಿ ಮನೆಮಾಡಿಕೊಂಡು ಜೀವಿಸತೊಡಗಿದ. ಈ ಸಂದರ್ಭದಲ್ಲಿ ಈತ ಪ್ರಾಣಿಜೀವನ ಕುರಿತು ಕೆಲವು ವಿಶಿಷ್ಟ ಬಗೆಯ ಪ್ರಬಂಧಗಳನ್ನು ರಚಿಸಿ ವಿಖ್ಯಾತನಾದ, ಜೇನುಹುಳುಗಳ ಜೀವನ ಕುರಿತ ದಿ ಲೈಫ್ ಆಫ್ ದಿ ಬೀಸ್ (1901) ಅಂಥ ಕೃತಿಗಳಲ್ಲೊಂದು. 1904ರಲ್ಲಿ ಈತನ ತಂದೆ ನಿಧನನಾದಾಗ ಆಸ್ತಿಯ ಹೊಣೆಗಾರಿಕೆಯ ಜೊತೆಗೆ ಇವನಿಗೆ ಆರ್ಥಿಕ ಸ್ವಾತಂತ್ರ್ಯ ಲಭ್ಯವಾಯಿತು. ಅನಂತರ ಪ್ಯಾರಿಸ್ ತೊರೆದು ದಕ್ಷಿಣ ಫ್ರಾನ್ಸ್‍ಗೆ ಹೋಗಿ ನೆಲೆಸಿದ. 1905ರಲ್ಲಿ ಬ್ಲೂಬಡ ಎಂಬ ನಾಟಕವನ್ನು ರಚಿಸಿದ. ಅನಂತರ ಇದು ಇವನ ಮಹೋನ್ನತ ಕೃತಿ ಎಂದು ಪ್ರಸಿದ್ಧಿಯಾಯಿತು. ರಷ್ಯನ್ ರಂಗಭೂಮಿಯ ಪ್ರಸಿದ್ದ ನಿರ್ದೇಶಕ ಸ್ಟಾನಿಸ್ ಲಾವೆಸ್ಕಿಯ ನಿರ್ದೇಶನದಲ್ಲಿ ಈ ನಾಟಕದ ಮೊದಲ ಪ್ರದರ್ಶನ 1908ರಲ್ಲಿ ಮಾಸ್ಕೋದಲ್ಲಿ ನಡೆಯಿತು.
1914ರಲ್ಲಿ ಮೊದಲನೆಯ ಮಹಾಯುದ್ಧ ಆರಂಭವಾದಾಗ ಈತ ಸೈನ್ಯ ಸೇರಲು ತಾಯ್ನಾಡಾದ ಬೆಲ್ಜಿಯನ್‍ಗೆ ವಾಪಸ್ಸಾದ. ಆದರೆ ವಯಸ್ಸಿನ ಕಾರಣಕ್ಕಾಗಿ ಈತನಿಗೆ ಸೈನ್ಯ ಸೇರುವ ಅವಕಾಶವಾಗಲಿಲ್ಲ. ಆಗ ಈತನಿಗೆ 52 ವರ್ಷ ವಯಸ್ಸು ಬೆಲ್ಜಿಯಮ್ ಜರ್ಮನ್ ಆಕ್ರಮಣಕ್ಕೆ ಒಳಗಾದಾಗ ತನ್ನ ದೇಶದ ಪರವಾಗಿ ಈತ ಇಟಲಿ, ಸ್ಪೇನ್, ಇಂಗ್ಲೆಂಡ್ ಅಮೇರಿಕ ದೇಶಗಳಲ್ಲಿ ಪ್ರವಾಸ ಕೈಗೊಂಡು ಸಾರ್ವಜನಿಕ ಭಾಷಣಗಳನ್ನು ಮಾಡಿ, ಲೇಖನಗಳನ್ನು ಬರೆದು ಜನಜಾಗೃತಿ ಮೂಡಿಸಿದ, 1919ರಲ್ಲಿ ಲೆಬ್ಲಾಂಕಳನ್ನು ತೊರೆದು ನಟಿ ರೀನೆ ದಹನ್ ಎಂಬಾಕೆಯನ್ನು ಮದುವೆಯಾದ, ಯುದ್ಧಾನಂತರದ ದಿನಗಳಲ್ಲಿ ಈ ಸಾರ್ವಜನಿಕ ಜೀವನದಿಂದ ಸಂಪೂರ್ಣವಾಗಿ ದೂರವಾಗಿ ಬರವಣಿಗೆಯಲ್ಲಿ ತೊಡಗಿದ್ದ. 1930ರಲ್ಲಿ ಇಟಲಿಗೂ, ಫ್ರಾನ್ಸಿಗೂ ಮಧ್ಯದ ಗಡಿಯಲ್ಲಿರುವ ನೀಸ್ ನಗರದಲ್ಲಿ ಒಂದು ಸುಂದರವಾದ ಮನೆಯನ್ನು ಪಡೆದು ವಿಶ್ರಾಂತಿ ಜೀವನ ನಡೆಸಿದ, ಎರಡನೆಯ ಮಹಾಯುದ್ದ ಆರಂಭವಾದಾಗ ಈತ ಪೋರ್ಚುಗಲ್‍ಗೆ ಹೋದ ಬೆಲ್ಜಿಯಮ್ ಫ್ರಾನ್ಸ್‍ಗಳ ಮೇಲೆ ದಾಳಿಯಾಗುವ ತನಕ ಅಲ್ಲಿದ್ದ. ಜರ್ಮನರ ಕ್ರೌರ್ಯ, ಹಿಂಸೆಗಳನ್ನು ಕಂಡು ಹೇಸಿ ಅಮೇರಿಕಕ್ಕೆ ಹೋದ, ನ್ಯೂಯಾರ್ಕ್‍ನಲ್ಲಿ ಸುಮಾರು ಏಳು ವರ್ಷಗಳ ಕಾಲ ಅಜ್ಞಾತ ಜೀವನ ನಡೆಸಿ 1947ರಲ್ಲಿ ಮತ್ತೆ ನೀಸ್‍ಗೆ ವಾಪಸ್ಸಾದ. 1948ರಲ್ಲಿ ಇವನ ಜೀವನಚರಿತ್ರೆ (ಮೆಮ್ವರ್) ಮೊನಾಕೋದಲ್ಲಿ ಪ್ರಕಟವಾಯಿತು. ಈತ ತನ್ನ 86ನೆಯ ವಯಸ್ಸಿನಲ್ಲಿ 6 ಮೇ 1949 ರಂದು ನಿಧನ ಹೊಂದಿದ. 

ಬೆಲ್ಜಿಯಮ್ ಸಾಹಿತ್ಯ ಲೋಕದ ಮಹತ್ವದ ಹೆಸರುಗಳಲ್ಲಿ ಮ್ಯಾಟರ್ ಲಿಂಕನದು ಬಹು ಮುಖ್ಯವಾದುದು. ಪದ್ಯ, ಕಾವ್ಯ, ನಾಟಕ, ತತ್ವ ಚಿಂತನೆಯ ಪ್ರಬಂಧಗಳು, ವೈಜ್ಞಾನಿಕ ವಿಚಾರಗಳು ಇವುಗಳನ್ನೊಳಗೊಂಡ ದೊಡ್ಡ ಸಾಹಿತ್ಯ ಸೃಷ್ಟಿಯನ್ನು ಈತ ತನ್ನ ದೇಶಕ್ಕೆ ಬಿಟ್ಟುಹೋಗಿದ್ದಾನೆ. ಮನುಷ್ಯನ ಹೃದಯರಂಗದಲ್ಲಿ ಗುಪ್ತಗೋಚರವಾಗಿ ಪ್ರತಿಕ್ಷಣವೂ ನಡೆಯುವ ನಾಟಕಕ್ಕೆ ಒಂದು ಮೂರ್ತಸ್ವರೂಪವನ್ನು ಈತ ತನ್ನ ನಾಟಕದಲ್ಲಿ ಕೊಟ್ಟಿದ್ದಾನೆ. ಈತನ ಪ್ರಬಂಧಗಳಲ್ಲಿ ಮಾನವನ ಆಸೆ-ಆಕಾಂಕ್ಷೆಗಳ ಉತ್ತಮೋತ್ತಮ ಚಿತ್ರವನ್ನು ನಾವು ಕಾಣಬಹುದಾಗಿದೆ.ತಾತ್ವಿಕತೆ ಹಾಗೂ ಸಾಂಕೇತಿಕತೆ ಇವನ ಬರವಣಿಗೆಯ ಪ್ರಧಾನ ಗುಣ, ನಾಟಕಕಾರನೆಂದೇ ಪ್ರಸಿದ್ಧನಾಗಿರುವ ಈತ ಇಪ್ಪತೈದಕ್ಕೂ ಹೆಚ್ಚು ನಾಟಕಗಳನ್ನೂ ರಚಿಸಿದ್ದಾನೆ. ಪ್ರಿನ್ಸೆಸ್ ಮ್ಯಾಲೀನೆ (1989) ದಿ ಇಂಟ್ರ್ಯೂಡರ್ (1891) ದಿ ಬ್ಲೈಂಡ್ (1891),ದಿ ಸವೆನ್ ಪ್ರಿನ್ಸೆಸ್ (1891) ಪೆಲ್ಲಿಯಸ್ ಆಂಡ್ ಮೆಲಿಸೆಂಡೆ(1893) ಇಂಟಿರಿಯರ್(1894)ಅಲ್ಲಾದಿನ್ ಅಂಡ್ ಪಲೋಮೈಡ್ಸ್(1894) ಅಗ್ಲವೈನ್ ಆಂಡ್ ಸ್ಯಾಲಿಸೆಟ್ (1896) ದಿ ಯೂಸ್ಲೆಸ್ ಡೆಲಿವರೆನ್ಸ್(1901) ಸಿಸ್ಟರ್ ಬಿಟ್ರೈಸ್ (1901) ಮೊನ್ನವನ್ನ (1902) ಜಾಯೋಜೆಲ್ಲಿ (1903) ದಿ ಮಿರಾಕಲ್ ಆಫ್ ಸೆಂಟ್ ಅಂಥೋನಿ (1903) ದಿ ಬ್ಲೂಬರ್ಡ (1908) ಮೇರಿ ಮ್ಯಾಗ್ಡಲೀನ್ (1909),ದಿ ಕ್ಲೌಡ್‍ದಟ್ ಲಿಫ್ಟೆಡ್ (1916) (ದಿ ಬೆಟ್ರೊತಲ್ (1918) ದಿ ಪವರ್ ಆಫ್ ದಿ ಡೆಡ್ (1026)-ಇವು ಇವನ ಕೆಲವು ಮುಖ್ಯ ನಾಟಕಗಳು.
ದಿ ಟ್ರೆಷರ್ ಆಫ್ ದಿ ಹಂಬಲ್, ವಿಸ್ಡಮ್ ಅಂಡ್ ಡೆಸ್ಟಿನಿ. ದಿ ಡಬ್ಬಲ್ ಗಾರ್ಡನ್,ಲೈಫ್ ಅಂಡ್ ಫ್ಲವರ್ಸ್, ದಿ ಆಫ್ ದಿಬೀಸ್ (1901) ದಿ ಲೈಫ್ ಆಫ್ ದಿ ವೈಟ್ ಅಂಟ್ (1926)ಅವರ ಎಟರ್‍ನಿಟಿ ಅನ್ ಡೆತ್-ಇವು ಇವನ ವಿಶಿಷ್ಟ ಪ್ರಬಂಧ ಕೃತಿಗಳು. 

ಬೆಲ್ಜಿಯಮ್ ದೇಶದ ಭಾಷಾ ಸಾಹಿತ್ಯದ ಪುನರುತ್ತಾನಕ್ಕಾಗಿ ದುಡಿದ ಮ್ಯಾಟರ್ ಲಿಂಕನಿಗೆ ಅನೇಕ ಗೌರವ ಪ್ರಶಸ್ತಿಗಳು ಲಭ್ಯವಾಗಿವೆ. ಬೆಲ್ಜಿಯಮ್ ಸಾಹಿತ್ಯ ಸಂಘ, ನಾಟಕ ಸಾಹಿತ್ಯಕ್ಕೆ ಮೂರು ವರ್ಷಗಳಿಗೊಮ್ಮೆ ಕೊಡುವ ಬಹುಮಾನವನ್ನು ಈತ ಎರಡು ಬಾರಿ (1902 ಮತ್ತು 1911) ಪಡೆದ 1911ರಲ್ಲಿ ಇವನಿಗೆ ನೋಬೆಲ್ ಪ್ರಶಸ್ತಿ ಲಭಿಸಿತು, ಹೀಗೆ ನೋಬೆಲ್ ಪ್ರಶಸ್ತಿ ಪಡೆದ ಬೆಲ್ಜಿಯಮ್ ಲೇಖಕರಲ್ಲಿ ಈತನೇ ಮೋದಲಿಗ, 1932ರಲ್ಲಿ ಇವನಿಗೆ ಕೌಂಟ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಇವನ ಮೊನ್ನವನ್ನ ಎಂಬ ನಾಟಕವನ್ನು ಎಸ್.ಜಿ ಶಾಸ್ತ್ರಿಯವರು ಕನ್ನಡಕ್ಕೆ ಅನುವಾದಿಸಿದ್ದಾರೆ. (1952)		

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ